ನಗರ ನೈರ್ಮಲ್ಯ ಶಿಲ್ಪ

ನಗರದ ನೈರ್ಮಲ್ಯವನ್ನೂ ಜನತೆಯ ಆರೋಗ್ಯವನ್ನೂ ಕಾಪಾಡಲು ಅಗತ್ಯವಾದ ಕಾರ್ಯಗಳೇನು ಎಂಬುದನ್ನು ಕುರಿತ ಅಧ್ಯಯನ. ನವೀನ ನಗರಗಳು ವಿಕಸಿಸಿದಂತೆ ಮತ್ತು ಏಕಾಣುಜೀವಿಶಾಸ್ತ್ರದಲ್ಲಿ ವ್ಯಾಪಕ ಪ್ರಗತಿ ಆದಂತೆ ನಗರ ನೈರ್ಮಲ್ಯ ಶಿಲ್ಪ ಒಂದು ಪ್ರತ್ಯೇಕ ಅಧ್ಯಯನ ಪ್ರಕಾರವಾಗಿ ಬೆಳೆಯುವುದು ಅನಿವಾರ್ಯವಾಯಿತು. ಮನೆಗಳಲ್ಲಿಯೇ ಕಕ್ಕಸು ನಿರ್ಮಾಣ, ಬೃಹನ್ನಗರಗಳ ಬೆಳವಣಿಗೆ, ಕೆಲವೇ ಜಾಗಗಳಲ್ಲಿ ಜನಸಂಖ್ಯೆಯ ಕೇಂದ್ರೀಕರಣ, ಅಗಾಧ ಕಟ್ಟಡಗಳ ನಿರ್ಮಾಣ ಮುಂತಾದ ಅಂಶಗಳು ನಗರ ನೈರ್ಮಲ್ಯ ಶಿಲ್ಪ ವೈಜ್ಞಾನಿಕವಾಗಿ ಬೆಳೆಯುವುದಕ್ಕೆ ಹೇತುವಾದವು. ಯಾವುದೇ ಪ್ರದೇಶದ ನೈರ್ಮಲ್ಯವನ್ನು ಕಾಪಾಡಲು ಬೇಕಾಗುವಂಥ ಸಿವಿಲ್ ಎಂಜಿನಿಯರಿಂಗ್ ಕಾರ್ಯಗಳನ್ನು ನಗರ ನೈರ್ಮಲ್ಯ ಶಿಲ್ಪ ನಿಯೋಜಿಸಿ, ನಿರ್ಮಿಸಿ ನೋಡಿಕೊಳ್ಳುವುದು ಮಾತ್ರವಲ್ಲದೆ ಮಲೇರಿಯಾ ನಿಯಂತ್ರಣ, ಇಲಿ ಹೆಗ್ಗಣ ಮುಂತಾದವುಗಳ ಹಾವಳಿಗಳನ್ನು ತಡೆಯುವುದು, ವಾಯುನಿಯಂತ್ರಣ, ಕೈಗಾರಿಕಾ ಶುಚಿತ್ವ ಮುಂತಾದವುಗಳ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತದೆ.

	ಆದಿಕಾಲದ ಕ್ರೀಟ್ ಮತ್ತು ಅಸ್ಸೀರಿಯಾ ದೇಶಗಳ ಕೆಲವು ನಗರಗಳಲ್ಲಿ ಕೊಚ್ಚೆನೀರು ಹರಿವ ಕೊಳವೆಗಳ ಅವಶೇಷಗಳು ದೊರೆತಿವೆ. ರೋಮ್ ದೇಶದಲ್ಲೂ ಇಂಥ ಕೊಳವೆಗಳಿದ್ದವು. ಆದರೆ ಅವು ಮುಖ್ಯವಾಗಿ ಮಳೆನೀರನ್ನು ಸಾಗಿಸುವುದಕ್ಕೆ ನಿರ್ಮಿಸಲ್ಪಟ್ಟಂಥವು. ಆಗಿನ ಕಾಲದಲ್ಲಿ ತ್ಯಾಜ್ಯ ವಸ್ತುವನ್ನು ರಸ್ತೆಗಳಲ್ಲಿ ಹಾಕುತ್ತಿದ್ದರು. ಅದನ್ನು ಮಳೆನೀರು ಕೊಚ್ಚಿಕೊಂಡುಹೋಗುತ್ತಿತ್ತು. ಹೀಗಾಗಿ ಆ ಕೊಳವೆಗಳಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೈವಿಕ ವಸ್ತುವಿನ ಅಂಶವಿರುತ್ತಿತ್ತು. ಮಧ್ಯಯುಗದಲ್ಲಿ ಕೊಳೆನೀರನ್ನು ಹರಿಸಲು ಕೊಳವೆ ವ್ಯವಸ್ಥೆ ಬಳಕೆಯಲ್ಲಿರಲಿಲ್ಲ. ಆಧುನಿಕ ಕಾಲದಲ್ಲಿ ಈ ವ್ಯವಸ್ಥೆ ಸುಸಂಘಟಿತ ರೂಪದಲ್ಲಿ ಬಳಕೆಗೆ ಬಂದಿತು. ಮೊದಮೊದಲು ಮಳೆನೀರಿನ ಮೋರಿಗಳು ಕೇವಲ ಮಳೆನೀರನ್ನು ಮಾತ್ರ ಸಾಗಿಸುತ್ತಿದ್ದವು. ಮನೆಗಳ ಕೊಳೆನೀರನ್ನು ಸಾಗಿಸುತ್ತಿರಲಿಲ್ಲ. ನಗರಗಳಲ್ಲಿಯ ಅಥವಾ ಅವುಗಳ ಹತ್ತಿರದಲ್ಲಿಯ ಯಾವುದೇ ಜಲಸಂಪದಕ್ಕೆ ತ್ಯಾಜ್ಯ ವಸ್ತುಗಳನ್ನು ಸಾಗಿಹಾಕುತ್ತಿದ್ದರು. ಆದರೆ ಮನುಷ್ಯನ ಮಲ ಮತ್ತು ಮನೆಗಳಲ್ಲಿ ಉತ್ಪತ್ತಿಯಾಗುವ ದ್ರವರೂಪದ ಕೊಳೆಗಳನ್ನು ಕೊಳೆನೀರಿನ ಕೊಳವೆಗಳಲ್ಲಿ ಸಾಗಿಸಬೇಕೆಂಬ ಅಂಶವನ್ನು ಕ್ರಮೇಣ ಅರ್ಥಮಾಡಿಕೊಳ್ಳಲಾಯಿತು.

	ನಿರ್ಮಲೀಕರಣದ ಅಂಶಗಳು: ನಗರ ನಿರ್ಮಲೀಕರಣದ ಕೆಲವು ಮೂಲ ಅಂಶಗಳು ಆರು: (i) ದಂಡವಸ್ತುಗಳನ್ನು ಸಂಗ್ರಹಿಸಿ ಸಾಗಿಸುವುದು; (ii) ಒಳ ಅಲಂಕರಣ; (iii) ಕಟ್ಟಡಗಳ ವಿನ್ಯಾಸ; (iv) ಒದ್ದೆಯನ್ನು ತಡೆಯುವುದು; (v) ಸುರಕ್ಷಿತವಾದ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಸರಬರಾಜು ಮಾಡುವುದು; (vi) ತ್ಯಾಜ್ಯ ವಸ್ತುಗಳ ಸಂಸ್ಕರಣ.

	ನೈರ್ಮಲ್ಯಶಿಲ್ಪದ ಅತಿಮುಖ್ಯ ಕರ್ತವ್ಯವೆಂದರೆ ತ್ಯಾಜ್ಯವಸ್ತುಗಳನ್ನು ಆದಷ್ಟು ಬೇಗ ಸಾಗಿಸುವುದು. ಇವು ಘನ, ದ್ರವ ಅಥವಾ ಅನಿಲ ರೂಪಗಳಲ್ಲಿ ಇರಬಹುದು. ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳನ್ನೆಲ್ಲ ಸರಿಯಾದ ಸಂಸ್ಕರಣೆಗೆ ಒಳಪಡಿಸಿದ ಬಳಿಕವೇ ಹೊರಹಾಕಬೇಕು. ಸ್ನಾನ ಮತ್ತು ಶೌಚಗೃಹಗಳಿಂದ ಹೊರಡುವ ಸ್ರಾವಗಳನ್ನು ಸರಿಯಾಗಿ ಸಂಸ್ಕರಣೆಗೆ ಒಳಪಡಿಸದಿದ್ದಲ್ಲಿ ಅವುಗಳಿಂದ ದುರ್ನಾತ ಉಂಟಾಗಿ ವಾತಾವರಣ ಕೆಟ್ಟುಹೋಗುತ್ತದೆ.

	ನಗರದಲ್ಲಿ ತ್ಯಾಜ್ಯ ಉತ್ಪತ್ತಿಯಾದ ಒಡನೆ ಅದನ್ನು ಹೊರಸಾಗಿಸಬೇಕು. ಈ ಕೆಲಸವನ್ನು ಎರಡು ವಿಧಾನಗಳಿಂದ ಮಾಡಬಹುದು:

ಸಂಗ್ರಹ ವಿಧಾನ: ಇದರಲ್ಲಿ ವಿವಿಧ ರೂಪದ ತ್ಯಾಜ್ಯಗಳನ್ನು ಬೇರೆಬೇರೆಯಾಗಿ ಸಂಗ್ರಹಿಸಿ, ಒಂದೊಂದನ್ನು ಬೇರೆಬೇರೆಯಾಗಿ ಸಾಗಿಸಿ ಹೊರಹಾಕುತ್ತಾರೆ. ಆಧುನಿಕ ನಗರಗಳಲ್ಲಿ ಈ ವ್ಯವಸ್ಥೆ ಈಗ ಬಳಕೆಯಲ್ಲಿಲ್ಲ.

ಜಲವಾಹನ ವ್ಯವಸ್ಥೆ: ಈ ವಿಧಾನದಲ್ಲಿ ಕೊಳೆನೀರನ್ನು ಸಂಸ್ಕರಣ ಸ್ಥಳಕ್ಕೆ ಸಾಗಿಸಿದ ಬಳಿಕ ಹೊರಹಾಕಲು ನೀರನ್ನು ಉಪಯೋಗಿಸಲಾಗುತ್ತದೆ. ಇದು ಈಗ ಎಲ್ಲ ನಗರಗಳಲ್ಲೂ ಬಳಕೆಯಲ್ಲಿದೆ. ಆದರೆ ಇದನ್ನು ಸ್ಥಾಪಿಸಿ, ನಡೆಸಿಕೊಂಡು ಹೋಗಲು ಹೆಚ್ಚು ಹಣ ಬೇಕಾಗುತ್ತದೆ. ಒಣತ್ಯಾಜ್ಯವನ್ನು ಸಂಗ್ರಹವ್ಯವಸ್ಥೆಯ ರೀತಿಯಲ್ಲಿಯೇ ತಟ್ಟೆಗಳಲ್ಲೋ ಬಕೆಟ್ಟುಗಳಲ್ಲೋ ತುಂಬಿಕೊಂಡು ತರುವಾಯ ಗಾಡಿ ಇಲ್ಲವೇ ಲಾರಿಗಳಲ್ಲಿ ಹೇರಿ ಅನುಕೂಲವಾದ ಜಾಗಗಳಿಗೆ ಸಾಗಿಸುತ್ತಾರೆ. ಮಳೆನೀರನ್ನು ಬೇರೆಯಾಗಿ ಸಾಗಿಸುತ್ತಾರೆ, ಇಲ್ಲವೇ ಕೊಳೆನೀರಿನ ಜೊತೆಯೇ ಹರಿಯುವಂತೆ ಮಾಡುತ್ತಾರೆ.

  ಕೊಳೆ ನೀರು ಕೊಳವೆ ವ್ಯವಸ್ಥೆಯಲ್ಲಿ ಮೂರು ವಿಧಾನಗಳಿವೆ:
ಪ್ರತ್ಯೇಕ ವಿಧಾನ: ಇದರಲ್ಲಿ ಮಳೆನೀರನ್ನೂ ಕೊಳೆನೀರನ್ನೂ ಬೇರೆ ಬೇರೆ ಕೊಳವೆಗಳಲ್ಲಿ ಸಾಗಿಸುತ್ತಾರೆ.

ಸಂಯುಕ್ತ ವಿಧಾನ: ಇದರಲ್ಲಿ ಕೊಳೆನೀರು ಕೊಳವೆಗಳ ಕೇವಲ ಒಂದೇ ಒಂದು ವ್ಯವಸ್ಥೆಯಿದ್ದು ಅದರಲ್ಲಿ ಮಳೆನೀರು ಮತ್ತು ಕೊಳೆನೀರು ಎರಡನ್ನೂ ಒಟ್ಟಿಗೆ ಸಾಗಿಸುತ್ತಾರೆ.

ಅರೆಪ್ರತ್ಯೇಕ ವಿಧಾನ: ಇದರಲ್ಲಿ ಮಳೆನೀರಿನ ಮೊದಮೊದಲ ತೊಳೆತಗಳು ಕೊಳೆನೀರಿನ ಜೊತೆ ಸೇರಲು ಅವಕಾಶ ಉಂಟು. ಮಳೆನೀರಿನ ಪ್ರಮಾಣ ಒಂದು ಮಿತಿಯನ್ನು ದಾಟಿದಮೇಲೆ ಅದನ್ನು ತೆರೆದ ಚರಂಡಿಗಳಲ್ಲಿ ಸಂಗ್ರಹಿಸಿ ಯಾವುದಾದರೂ ಜಲಸಂಪದದ ಕಡೆಗೆ ಹಾಯಿಸುತ್ತಾರೆ.

	ಕೊಳೆನೀರು ಕೊಳವೆಗಳಿಗೆ ಯುಕ್ತವಾದ ವಾಯುಸಂಚಾರ ವ್ಯವಸ್ಥೆಯನ್ನು ಒದಗಿಸಿರುತ್ತಾರೆ. ಏಕೆಂದರೆ, ಕೊಳೆನೀರು ವಿಭಜನೆಗೊಂಡು ಕೆಟ್ಟು ಅನಿಲಗಳು ಉತ್ಪತ್ತಿಯಾದಾಗ ಹೊಸ ಗಾಳಿ ಸಂಚಾರವಾಗುವಂತಿದ್ದು, ಅನಂತರ ಆ ಅನಿಲಗಳು ಹೊರಸಾಗಿಸಲ್ಪಡುವಂತಿರಬೇಕು.

	ನೆಲದಲ್ಲಿ ಅಗಲವಾದ ತೂತುಗಳನ್ನು ಕೊರೆದು ನೆಲದ ಅಡಿಯಲ್ಲಿರುವ ಕೊಳೆನೀರ ಕೊಳವೆಗಳನ್ನು ಮನುಷ್ಯ ಪ್ರವೇಶಿಸಲು ಅನುಕೂಲತೆ ಒದಗಿಸುತ್ತಾರೆ. ಇವುಗಳಿಗೆ ಆಳುಕಿಂಡಿಗಳೆಂದು ಹೆಸರು. ಕೊಳೆನೀರು ಕೊಳವೆಗಳ ತನಿಖೆಗಾಗಿಯೂ ಇವನ್ನು ಒದಗಿಸಿರುತ್ತಾರೆ. ಆಳುಕಿಂಡಿಗಳನ್ನು ಜಾಲರಿಗಳುಳ್ಳ ಮುಚ್ಚಳದಿಂದ ಮುಚ್ಚಿರುತ್ತಾರೆ.

	ಕೆಲವು ವೇಳೆ ಮಲನೀರು ಮತ್ತು ಮಳೆನೀರುಗಳನ್ನು ಮೇಲುಮೋರಿಗಳಿಂದ ಸಾಗಿಸುತ್ತಾರೆ. ಇದು ಆರೋಗ್ಯಕಾರ ವಿಧಾನವಲ್ಲ.

	ನಗರನೈರ್ಮಲ್ಯ ಸುಲಭವಾಗಿಯೂ ದಕ್ಷವಾಗಿಯೂ ನಡೆದು ದುರಸ್ತಿಕಾರ್ಯ ಮಿತವ್ಯಯದಲ್ಲಿ ಆಗಬೇಕಾದರೆ ಕೊಳೆನೀರು ಕೊಳವೆ ವ್ಯವಸ್ಥೆಯಲ್ಲಿ ಅನೇಕ ರಚನೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳಿಗೆ ಕೊಳೆನೀರು ಕೊಳವೆ ಸಲಕರಣೆಗಳು ಎಂದು ಹೆಸರು. ಇವುಗಳ ವಿವರಗಳು ಹೀಗಿವೆ:

	(i) ಹಿಡಿ ಪಾತ್ರಗಳು: ಇವು ಮಳೆನೀರಿನಲ್ಲಿನ ಸೂಸುಮಣ್ಣು, ಹೊಯ್ಗೆ ಭಗ್ನವಸ್ತುಗಳು ಮುಂತಾದವು ಕೊಳೆನೀರಕೊಳವೆಗಳನ್ನು ಪ್ರವೇಶಿಸುವುದನ್ನು ತಡೆಯುತ್ತವೆ.

	(ii) ಶುದ್ಧಿ ಕೊಳವೆಗಳು: ಇವು ನೆಲದ ಮಟ್ಟದಿಂದ ಕೊಳೆನೀರಕೊಳವೆಗಳಿಗೆ ಸಂಪರ್ಕಿಸಲಾಗಿರುವ ಕೊಳವೆಗಳು. ಕೊಳೆನೀರಕೊಳವೆಗಳಲ್ಲಿ ಇರಬಹುದಾದ ಅಡಚಣೆಗಳನ್ನು ನಿವಾರಿಸಲು ಇವನ್ನು ನಿರ್ಮಿಸಿರುತ್ತಾರೆ.

ಚಿತ್ರ-1

	(iii) ಆಳು ಕಿಂಡಿಗಳು: ಇವನ್ನು ಕೊಳೆನೀರಕೊಳವೆಗಳ ತನಿಖೆಗೆ ಮತ್ತು ಶುದ್ಧೀಕರಣಕ್ಕೆ ಒದಗಿಸಿರುತ್ತಾರೆ. ಇವು ನೆಲದಲ್ಲಿ ಅಗೆದಿರುವ ದೊಡ್ಡ ಕಿಂಡಿಗಳು. ಸಣ್ಣಬಾವಿಯ ರೂಪದಲ್ಲಿದ್ದು ಇವು ಕೊಳೆನೀರಕೊಳವೆಗಳಿಗೆ ಸಂಪರ್ಕವನ್ನು ಕಲ್ಪಿಸಿಕೊಡುತ್ತವೆ. ಇವುಗಳ ಮುಖಾಂತರ ಒಬ್ಬ ಮನುಷ್ಯ ಒಳಕ್ಕೆ ಇಳಿದು ಕೊಳೆನೀರಕೊಳವೆಗಳ ತನಿಖೆಯನ್ನೂ ದುರಸ್ತಿಯನ್ನೂ ನಡೆಸಬಹುದು.

ಚಿತ್ರ-2

	(iv) ನೀರು ಝಳಕಿಸಿ ತೊಳೆಯುವ ತೊಟ್ಟಿಗಳು: ಈ ವ್ಯವಸ್ಥೆಯಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಅನಂತರ ಕೊಳೆನೀರಕೊಳವೆಯೊಳಕ್ಕೆ ಅದನ್ನು ಝಳಕಿಸಿ, ತೊಳೆಯಲು ಸಾಧನವಿದೆ.

	(v) ಜಿಡ್ಡು ಮತ್ತು ಎಣ್ಣೆಗಳ ಬೋನುಗಳು: ಇವು ಕೊಳೆನೀರಕೊಳವೆಗಳ ಸಾಲಿನಲ್ಲಿ ಮಧ್ಯೆ ಮಧ್ಯೆ ನಿರ್ಮಿಸಲಾಗಿರುವ ಕೋಣೆಗಳು. ಕೊಳವೆಗಳನ್ನು ಕೊಳೆನೀರು ಪ್ರವೇಶಿಸುವ ಮುನ್ನ ಇವು ಅದರಲ್ಲಿರುವ ಜಿಡ್ಡು ಮತ್ತು ಎಣ್ಣೆಗಳ ಅಂಶಗಳನ್ನು ತೆಗೆದುಹಾಕುತ್ತವೆ. ಹೀಗಿಲ್ಲದಿದ್ದರೆ ಎಣ್ಣೆ ಮತ್ತು ಜಿಡ್ಡಿನ ಅಂಶಗಳಿಂದ ಬೇರೆ ಬೇರೆ ಘನವಸ್ತುಗಳು ಕೊಳವೆಗಳ ಒಳಭಾಗದಲ್ಲಿ ಸಂಗ್ರಹವಾಗತೊಡಗಿ ಅದರಿಂದ ಕೊಳೆನೀರು ಹರಿಯಲು ಅಡಚಣೆ ಉಂಟಾಗುತ್ತದೆ. ಇದಲ್ಲದೆ ಅನೇಕ ರೀತಿಯ ಅನಿಲಗಳೂ ಉತ್ಪತ್ತಿಯಾಗಿ ಕೆಲವು ವೇಳೆ ಕೊಳವೆಗಳು ಆಸ್ಫೋಟನೆಗಳಿಗೆ ಕಾರಣವಾಗುತ್ತವೆ.

	(Vi) ಒಳಮಾರ್ಗಗಳು: ಇವು ಮಳೆನೀರು ಒಳಕ್ಕೆ ಹರಿದು ಮಳೆನೀರು ಕೊಳವೆಗಳನ್ನು ಪ್ರವೇಶಿಸಲು ಒದಗಿಸಲಾಗಿರುವ ಸಾಧನಗಳು.

ಚಿತ್ರ-3

	(7) ತಲೆಕೆಳಕಾದ ಇಳಿಕೊಳವೆಗಳು: ಇವನ್ನು ಸಾಧಾರಣ ಕೊಳೆನೀರು ಕೊಳವೆಗಳ ಮಟ್ಟಕ್ಕಿಂತ ಕೆಳಗೆ ಒದಗಿಸಿರುತ್ತಾರೆ. ಇವುಗಳಲ್ಲಿ ಕೊಳೆನೀರು ಭರ್ತಿ ಹರಿಯುತ್ತಿದ್ದು, ಒಳಗಿನ ಒತ್ತಡ ವಾಯುಭಾರಕ್ಕಿಂತ ಜಾಸ್ತಿ ಇರುವುದು.

	(8) ದೀಪಕಿಂಡಿಗಳು: ಇವು ಕೊಳೆನೀರಕೊಳವೆಗಳಲ್ಲಿ ಯುಕ್ತ ಸ್ಥಳಗಳಲ್ಲಿ ಒದಗಿಸಲಾಗಿರುವ ಕಿಂಡಿಗಳು. ಇವುಗಳ ಮುಖಾಂತರ ದೀಪವನ್ನು ಇಳಿಬಿಟ್ಟು ತನಿಖೆ ನಡೆಸುತ್ತಾರೆ. ಅಲ್ಲದೆ ಇವುಗಳ ಮೂಲಕ ನೀರನ್ನು ಝಳಕಿಸಬಹುದು ಹಾಗೂ ವಾಯುಸಂಚಾರವನ್ನು ಉಂಟುಮಾಡಬಹುದು.

	(9) ಮಳೆನೀರು ನಿಯಂತ್ರಕಗಳು: ಬೆರೆತ ಕೊಳೆನೀರಿನ ಪ್ರಮಾಣ ಒಂದು ಮಿತಿಯನ್ನು ದಾಟಿದಾಗ ಅದರ ಸ್ವಲ್ಪಭಾಗವನ್ನು ಇವುಗಳ ನೆರವಿನಿಂದ ಬೇರೆಡೆಗೆ ತಿರುಗಿಸಬಹುದು.

	ಯಾವುದೇ ಪ್ರದೇಶದ ನೀರುಸಾಗಾಣಿಕೆಯನ್ನು ಸ್ಥೂಲವಾಗಿ ಎರಡು ರೀತಿಯಾಗಿ ವಿಂಗಡಿಸಬಹುದು: ಸಾರ್ವಜನಿಕ ನೀರು ಸಾಗಾಣಿಕೆ ಮತ್ತು ಖಾಸಗಿ ನೀರು ಸಾಗಾಣಿಕೆ.

	ಖಾಸಗಿ ಕಟ್ಟಡಗಳಲ್ಲಿ ಕೊಳೆನೀರುಕೊಳವೆಗಳನ್ನು ಒದಗಿಸುವ ವ್ಯವಸ್ಥೆಗೆ ಮನೆಯ ನೀರುಸಾಗಾಣಿಕೆ ಎನ್ನುತ್ತಾರೆ. ಮನೆಗಳಲ್ಲಿಯ ಕಚಡವಸ್ತುಗಳನ್ನು ದಕ್ಷವಾಗಿ ಸಂಗ್ರಹಿಸಿ, ನಿವಾರಿಸಲು ಸಾಮಾನ್ಯವಾಗಿ ಒದಗಿಸಬೇಕಾದ ನಿರ್ಮಲೀಕರಣ ಜೋಡಣೆಗಳು ಹೀಗಿರುತ್ತವೆ: (1) ಸ್ನಾನತೊಟ್ಟಿಗಳು (2) ಕುಡಿಯುವ ನೀರು ಚಿಲುಮೆಗಳು, (3) ಝಳಕಿಸಿ ತೊಳೆಯುವ ತೊಟ್ಟಿಗಳು, (4) ತೊಟ್ಟಿಗಳು, (5) ಮೂತ್ರಿಗಳು, (6) ತೊಳೆಯುವ ಬೋಗುಣಿಗಳು, (7) ಬಚ್ಚಲುಗಳು.

	ಕೊಳೆನೀರು ಹಳತಾಗುತ್ತಿದ್ದಂತೆ ಅದು ವಿಭಜಿಸತೊಡಗಿ ಅದರಿಂದ ಕೆಟ್ಟ ವಾಸನೆ ಉಂಟಾಗಿ ವಾತಾವರಣವೆಲ್ಲ ಕೆಡಲಾರಂಭಿಸುತ್ತದೆ. ಆದ್ದರಿಂದ ಅದನ್ನು ಅದು ಉತ್ಪತ್ತಿಯಾದ 4-5 ಗಂಟೆಗಳ ಒಳಗೆ ಸಾಗಹಾಕಬೇಕು.

	ಕೊಳೆನೀರು ವಿನಿಯೋಗವನ್ನು ಸ್ಥೂಲವಾಗಿ ಎರಡು ವಿಧಾನಗಳಾಗಿ ವಿಂಗಡಿಸಬಹುದು: ಸ್ವಾಭಾವಿಕ ವಿಧಾನಗಳು, ಕೃತಕ ವಿಧಾನಗಳು. 

	ಸ್ವಾಭಾವಿಕ ವಿಧಾನಗಳಲ್ಲಿ ಕೊಳೆನೀರನ್ನು ಹೆಚ್ಚು ನೀರಿನೊಡನೆ ಬೆರೆಯುವಂತೆ ಮಾಡಿ, ತೆಳ್ಳಗಾಗಿಸಿ ಸಾಗಹಾಕುತ್ತಾರೆ. ಇಲ್ಲವೇ ಭೂಸಂಸ್ಕರಣೆಗೆ ಒಳಪಡಿಸುತ್ತಾರೆ.

	ಕೃತಕ ವಿಧಾನಗಳಲ್ಲಿ ಕೊಳೆನೀರಿಗೆ ಯೋಗ್ಯ ಚಿಕಿತ್ಸೆ ಕೊಟ್ಟು, ಅದನ್ನು ಹಾನಿಕಾರಕವಲ್ಲದಂತೆ ಮಾಡಿ ಅನಂತರ ನದಿಗೋ ಸಮುದ್ರಕ್ಕೋ ಹಾಯಿಸುತ್ತಾರೆ.

	ಕೊಳೆನೀರು ಸಂಸ್ಕರಣೆ ಮಾಡಲು ಮುಖ್ಯವಾಗಿ ಮೂರು ವಿಧಾನಗಳಿವೆ: (i) ಪ್ರಾಥಮಿಕ ಸಂಸ್ಕರಣೆ, (ii) ದ್ವಿತೀಯಕ ಸಂಸ್ಕರಣೆ ಮತ್ತು (iii) ಕೀಟನಾಶನ.

	ಪ್ರಾಥಮಿಕ ಸಂಸ್ಕರಣೆಯಲ್ಲಿ ಕೊಳೆನೀರಿನಲ್ಲಿರುವ ದೊಡ್ಡ ದೊಡ್ಡ ಘನವಸ್ತುಗಳನ್ನು ತೆಗೆದುಹಾಕುತ್ತಾರೆ. ದ್ವಿತೀಯಕ ಸಂಸ್ಕರಣೆಯಲ್ಲಿ ಕೊಳೆನೀರನ್ನು ಆಮೂಲಾಗ್ರವಾಗಿ ಚಿಕಿತ್ಸೆಗೆ ಒಳಪಡಿಸುತ್ತಾರೆ. ಇದರಲ್ಲಿ ಕೊಳೆನೀರನ್ನು ಸಂಪೂರ್ಣವಾಗಿ ಶೋಧಿಸುತ್ತಾರೆ; ಅಥವಾ ಅದನ್ನು ಚುರುಕುಗೊಳಿಸಿದ ತಳವಸ್ತು ವಿಧಾನಕ್ಕೆ ಒಳಪಡಿಸುತ್ತಾರೆ.

	ಕೀಟನಾಶನವನ್ನು ಪ್ರಾಥಮಿಕ ಅಥವಾ ದ್ವಿತೀಯಕ ಸಂಸ್ಕರಣ ವಿಧಾನಗಳಲ್ಲಿ ಬಳಸುತ್ತಾರೆ. ಈ ವಿಧಾನದಲ್ಲಿ ಕ್ಲೋರೀನಿನ ಸಹಾಯದಿಂದ ಕೊಳೆನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನೆಲ್ಲ ನಾಶಮಾಡಲಾಗುತ್ತದೆ.

	ತಳವಸ್ತು ತೊಟ್ಟಿಗಳ ಅಥವಾ ಶುದ್ಧೀಕಾರಕಗಳ ತಳದಲ್ಲಿ ತಳವೂರುವ ಕೊಳೆನೀರಿನಲ್ಲಿಯ ನಿಲಂಬಿತ ಕಣಗಳಿಗೆ ಕೊಳೆನೀರು ತಳವಸ್ತು ಎಂದು ಹೆಸರು. ಸಂಸ್ಕರಣೆಯ ಬಳಿಕ ಕೊಳೆನೀರು ಎರಡು ಪದಾರ್ಥಗಳಾಗಿ ಬೇರ್ಪಡಿಸಲ್ಪಡುತ್ತದೆ: (1) ಹೊರಹರಿಯುವ ದ್ರವ, (2) ಕೊಳೆನೀರುಗಳ ವಸ್ತು.

	ಹೊರ ಹರಿಯುವ ದ್ರವ ನಿರುಪದ್ರವಿ. ಇದು ವಾಸನಾರಹಿತ ಮತ್ತು ಸ್ವಚ್ಛವಾಗಿರುತ್ತದೆ. ಇದನ್ನು ಸಾಗಿಸುವುದು ಬಹಳ ಸುಲಭವಾದ ಕೆಲಸ. ಕೊಳೆನೀರು ತಳವಸ್ತು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಅದರ 100 ಭಾಗಗಳಲ್ಲಿ 4 ಭಾಗಗಳಷ್ಟು ಘನವಸ್ತುಗಳೂ 96 ಭಾಗಗಳಷ್ಟು ನೀರೂ ಇರುತ್ತವೆ. ಅದರ ನೀರಿನ ಪ್ರಮಾಣ 10ರಷ್ಟು ಇಳಿದಾಗ ಅದು ಪುಡಿಯ ರೂಪವನ್ನು ತಾಳುತ್ತದೆ. ಇದನ್ನು ಸಾಧಿಸಲು ಕೊಳೆನೀರು ತಳವಸ್ತುವಿಗೆ ವಿಶೇಷ ಸಂಸ್ಕರಣೆ ನೀಡಿ ತರುವಾಯ ಅದನ್ನು ಹೊರಸಾಗಿಸಬೇಕಾಗುತ್ತದೆ.

	ಒಣಗಿದ ಕೊಳೆನೀರು ತಳವಸ್ತುವನ್ನು ಒಳ್ಳೆಯ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ಅದನ್ನು ತಗ್ಗುಪ್ರದೇಶದಲ್ಲಿ ಗುಡ್ಡೆ ಹಾಕಬಹುದು ಅಥವಾ ನೆಲದಲ್ಲಿ ಹೂಳಬಹುದು ಇಲ್ಲವೇ ಬೆಂಕಿಯಿಂದ ಸುಡಬಹುದು.

	ಪಚನ ತೊಟ್ಟಿಗಳಲ್ಲಿ ಸಂಗ್ರಹವಾಗುವ ಕೊಳೆನೀರು ತಳವಸ್ತುವಿನಿಂದ ಮುಂದೆ ಸೂಚಿಸಿರುವ ಉಪಯೋಗಗಳನ್ನು ಪಡೆಯಬಹುದು: (i) ಅನಿಲಯಂತ್ರಗಳಲ್ಲಿ, ಸಾಮಥ್ರ್ಯ ಉತ್ಪಾದನೆ; (ii) ಕೊಳೆನೀರು ತಳವಸ್ತುವಿನ ಶುಷ್ಕೀಕರಣ; (iii) ಕೊಳೆನೀರು ತಳವಸ್ತುವಿನ ಪಚನ ತೊಟ್ಟಿಗಳನ್ನು ಕಾಸುವುದು; (iv) ಜರಡಿಯಾಡಿದ ಮತ್ತು ಮೇಲೆ ಸವರಿ ತೆಗೆದ ವಸ್ತುಗಳನ್ನು ಸುಡುವುದು; (v) ಚಿಕಿತ್ಸಾ ಕಾರ್ಯಾಗಾರಗಳನ್ನು ಬೆಳೆಸುವುದು; (vi) ವಾಣಿಜ್ಯಮಟ್ಟದಲ್ಲಿ ಮೀಥೇನ್ ಅನಿಲದ ಉತ್ಪಾದನೆ; (vii) ಸುತ್ತಮುತ್ತಲ ಕಟ್ಟಡಗಳಿಗೆ ಉಷ್ಣವನ್ನು ಒದಗಿಸುವುದು; (viii) ಮೋಟಾರುವಾಹನಗಳಿಗೆ ಇಂಧನವಾಗಿ ಉಪಯೋಗಿಸುವುದು; (ix) ಪ್ರಯೋಗಾಲಯದ ಬರ್ನರುಗಳಿಗೆ ಮತ್ತು ನೀಲಶೀತಕಗಳಿಗೆ ಅನಿಲವನ್ನು ಒದಗಿಸುವುದು.		(ಎಸ್.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ